ಬಾಯ್ಡ್, ಜಾನ್ ಆರ್  
1880-1971. ಬ್ರಿಟಿಷ್ ಆಹಾರವಿಜ್ಞಾನಿ. ಸ್ಕಾಟ್ಲೆಂಡಿನ ಕಿಲ್ ಮಾರ್ಸ ಐರ್‍ಶೈರಿನಲ್ಲಿ 1880 ಸೆಪ್ಟೆಂಬರ್ 23ರಂದು ಜನನ. ಗ್ಲಾಸ್ಗೊ ವಿಶ್ಪವಿದ್ಯಾಲಯದಲ್ಲಿ ಅಧ್ಯಯನ. ಪೌಷ್ಟ್ಟಿಕತೆ ಬಗ್ಗೆ ಉನ್ನತ ವ್ಯಾಸಂಗ ಮಾಡಿದ. 1914ರಲ್ಲಿ ಅಬರ್ಡೀನ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಪೌಷ್ಟಿಕತಾ ಸಂಸ್ಥೆಯ ಸಂಚಾಲಕನಾಗಿ ನೇಮಿಸಲ್ಪಟ್ಟ. 1936ರಲ್ಲಿ ಈತ ಪ್ರಕಟಿಸಿದ ಆಹಾರ ಆರೋಗ್ಯ ಮತ್ತು ವರಮಾನ ಲೇಖನ ಇವನಿಗೆ ವ್ಯಾಪಕ ಪ್ರಸಿದ್ಧಿ ತಂದುಕೊಟ್ಟಿತು. ಬೇರೆ ಬೇರೆ ವರಮಾನ ಹೊಂದಿರುವ ಜನಗಳ ಆಹಾರ ಸೇವನೆ ಮತ್ತು ಗುಣಾಂಶಗಳ ಬಗ್ಗೆ ಅಂಕೆ ಅಂಶ ಸಂಗ್ರಹಿಸಿ ಬ್ರಿಟಿಷ್ ಪ್ರಜಾಸಂಖ್ಯೆಯ ಪೈಕಿ ಅರ್ಧದಷ್ಟು ಮಂದಿ ಸಂತುಲಿತ ಆಹಾರ ಹೊಂದಲು ಅಸಮರ್ಥರಾಗಿದ್ದರೆಂಬುದನ್ನೂ ಶೇಕಡಾ 10ರಷ್ಟು ಮಂದಿಗೆ ಪೌಷ್ಟಿಕಾಂಶದ ಆಹಾರ ಏನೇನೂ ದೊರೆಯುತ್ತಿಲ್ಲವೆಂಬುದನ್ನೂ ತೋರಿಸಿಕೊಟ್ಟ. ಈ ವಿಷಯ ಸಂಗ್ರಹ ಮತ್ತು ರೋವೆಟ್ ಸಂಸ್ಥೆ ನಡೆಸಿದ ಅಧ್ಯಯನ ಎರಡನೆಯ ಮಹಾ ಯುದ್ಧದ ವೇಳೆ ಬ್ರಿಟಿಷ್ ರಾಜ್ಯದಲ್ಲಿ ಹಸುಗೆ ಪದ್ಧತಿ ಜಾರಿಗೆ ತರುವಂತೆ ಮಾಡಿತು. ಆಗ ಬಾಯ್ಡ್ ಆಹಾರ ನಿಯಮಾವಳಿಗಳನ್ನು ನಿಗದಿ ಮಾಡುವ ವಿಜ್ಞಾನ ಸಂಘದ ಸದಸ್ಯನಾಗಿ ವ್ಯವಸಾಯ ವಿಭಾಗದ ಮುಖ್ಯಸ್ಥನಾಗಿದ್ದ 1945ರಲ್ಲಿ ಈತ ಗ್ಲಾಸ್ಗೊ ವಿಶ್ವವಿದ್ಯಾಲಯದ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ. ಸ್ಕಾಟ್ಲೆಂಡ್ ವಿಶ್ಪವಿದ್ಯಾಲಯದ ಲೋಕಸಭಾ ಸದಸ್ಯನಾಗಿಯೂ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಹಾರ ಮತ್ತು ವ್ಯವಸಾಯ ಸಂಸ್ಥೆಯ (ಎಫ್.ಎ.ಓ.) ಮುಖ್ಯಸ್ಥನಾಗಿಯೂ ಚುನಾಯಿಸಲ್ಪಟ್ಟ. 1948ರ ತನಕ ಅದೇ ಹುದ್ದೆಯಲ್ಲಿದ್ದ. ಆಹಾರ ಮತ್ತು ವ್ಯವಸಾಯ ಸಂಸ್ಥೆಯಲ್ಲಿ ಇವನು ಮಾಡಿದ ಕೆಲಸ ಮತ್ತು ನಡೆಸಿದ ಸಂಶೋಧನೆಗಳು ಇವನಿಗೆ 1949ನೇ ಸಾಲಿನ ಶಾಂತಿ ನೊಬೆಲ್ ಪಾರಿತೋಷಿಕ ತಂದುಕೊಟ್ಟವು. ಸ್ವಗೃಹದಲ್ಲಿ ಮರಣ, 25 ಜೂನ್ 1971  (ಬ್ರೆಚಿನ್, ಅಂಗಸ್).             (ಎಚ್.ಆರ್.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ